ಮೇ 31 ರಂದು ಮುಂದೆ ಪ್ರಜ್ವಲ್ ಹಾಜರು: ಡಿಕೆಶಿ, ಡಾ. ಜಿ.ಪರಮೇಶ್ವರ್, ಕುಮಾರಸ್ವಾಮಿ ಹೇಳಿದ್ದು ಹೀಗೆ... ಜೆಡಿಎಸ್ ಸಂಸದ ಪ್ರಜ್ವಲ್ ರೇವಣ್ಣ, ಮೇ 31 ರಂದು ವಿಶೇಷ ತನಿಖಾ ತಂಡ (ಎಸ್‌ಐಟಿ) ಮುಂದೆ ಹಾಜರಾಗಿ ನಂತರ ತನಿಖೆಗೆ ಸಹಕರಿಸುವುದಾಗಿ ಸೋಮವಾರ ನೀಡಿರುವ ಹೇಳಿಕೆಯನ್ನು ಗೃಹ ಸಚಿವ ಜಿ ಪರಮೇಶ್ವರ್ ಸ್ವಾಗತಿಸಿದ್ದಾರೆ. ಬೆಂಗಳೂರು: ಹಲವು ಮಹಿಳೆಯರ ಮೇಲೆ ಲೈಂಗಿಕ ದೌರ್ಜನ್ಯವೆಸಗಿದ ಆರೋಪ ಎದುರಿಸುತ್ತಿರುವ ಅಮಾನತುಗೊಂಡಿರುವ ಜೆಡಿಎಸ್ ಸಂಸದ ಪ್ರಜ್ವಲ್ ರೇವಣ್ಣ, ಮೇ 31 ರಂದು ವಿಶೇಷ ತನಿಖಾ ತಂಡ (ಎಸ್‌ಐಟಿ) ಮುಂದೆ ಹಾಜರಾಗಿ ನಂತರ ತನಿಖೆಗೆ ಸಹಕರಿಸುವುದಾಗಿ ಸೋಮವಾರ ನೀಡಿರುವ ಹೇಳಿಕೆಯನ್ನು ಗೃಹ ಸಚಿವ ಜಿ ಪರಮೇಶ್ವರ್ ಸ್ವಾಗತಿಸಿದ್ದಾರೆ.ಸುದ್ದಿಗಾರರೊಂದಿಗೆ ಮಾತನಾಡಿದ ಡಾ. ಜಿ. ಪರಮೇಶ್ವರ್, ಮೇ 31 ರಂದು ಬೆಳಗ್ಗೆ 10 ಗಂಟೆಗೆ ಎಸ್ ಐಟಿ ಮುಂದೆ ಹಾಜರಾಗುವುದಾಗಿ ವಿಡಿಯೋ ಮೂಲಕ ಪ್ರಜ್ವಲ್ ರೇವಣ್ಣ ಹೇಳಿದ್ದು, ತನಿಖೆಗೆ ಸಹಕರಿಸುವುದಾಗಿ ಹೇಳಿದ್ದಾರೆ. ಅವರ ಹೇಳಿಕೆಯನ್ನು ಸ್ವಾಗತಿಸುವುದಾಗಿ ಹೇಳಿದರು.ನಿಮಗೆಲ್ಲರಿಗೂ ತಿಳಿದಿರುವಂತೆ ಕರ್ನಾಟಕ ಇತಿಹಾಸದಲ್ಲಿ ಇಂತಹ ಘಟನೆಗಳು ನಡೆದಿಲ್ಲ ಎಂದು ಜನರು ಹೇಳುತ್ತಿರುವ ಸಮಯದಲ್ಲಿ ಪ್ರಜ್ವಲ್ ಅವರನ್ನು ವಿದೇಶದಿಂದ ಕರೆತರಲು ಎಲ್ಲಾ ಪ್ರಯತ್ನಗಳು ನಡೆಯುತ್ತಿದೆ. ಅವರ ರಾಜತಾಂತ್ರಿಕ ಪಾಸ್ ಪೋರ್ಟ್ ರದ್ದುಗೊಳಿಸುವಂತೆ ಕೋರಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಪ್ರಧಾನಿಗೆ ಎರಡು ಪತ್ರ ಬರೆದಿದ್ದಾರೆ. ಬ್ಲೂ ಕಾರ್ನರ್ ನೋಟಿಸ್ ನೀಡುವಂತೆ ಸಿಬಿಐ ಮೂಲಕ ಇಂಟರ್ ಪೋಲ್ ಗೆ ಮನವಿ ಮಾಡಿದ್ದೇವು. ಕೊನೆಗೂ ನೋಟಿಸ್ ನೀಡಲಾಗಿದೆ ಎಂದು ತಿಳಿಸಿದರು.ಪ್ರಜ್ವಲ್ ಅವರನ್ನು ಆದಷ್ಟು ಬೇಗ ರಾಜ್ಯಕ್ಕೆ ವಾಪಸ್ ಕರೆತರಲು ರಾಜತಾಂತ್ರಿಕ ಪಾಸ್ ಪೋರ್ಟ್ ರದ್ದುಗೊಳಿಸುವಂತೆ ಕೇಂದ್ರದ ಬಳಿ ರಾಜ್ಯ ಸರ್ಕಾರ ಮನವಿ ಮಾಡಿತ್ತು. ಪಾಸ್ ಪೋರ್ಟ್ ರದ್ದುಗೊಳಿಸುವ ಪ್ರಕ್ರಿಯೆ ನಡೆಯುತ್ತಿರುವುದಾಗಿ ಕೇಂದ್ರ ವಿದೇಶಾಂಗ ಸಚಿವಾಲಯ ಇತ್ತೀಚಿಗೆ ಹೇಳಿತ್ತು. ಪ್ರಜ್ವಲ್ ಅವರ ಹೇಳಿಕೆಯನ್ನು ಸ್ವಾಗತಿಸುತ್ತೇನೆ. ಅವರು ಬಂದು ಎಸ್‌ಐಟಿ ಮುಂದೆ ಹೇಳಿಕೆ ನೀಡಬೇಕು. ಎಸ್‌ಐಟಿ ತನ್ನಲ್ಲಿರುವ ಮಾಹಿತಿ ಮತ್ತು ಸಾಕ್ಷ್ಯಾಧಾರಗಳ ಆಧಾರದ ಮೇಲೆ ಬಂಧನ ವಾರಂಟ್ ಹೊರಡಿಸಿರುವುದರಿಂದ ಅವರನ್ನು ಬಂಧಿಸಬೇಕಾಗಬಹುದು. ಆದರೆ, ಯಾವಾಗ ಶರಣಾಗುತ್ತಾರೆ. ಎಸ್‌ಐಟಿ ಹೇಗೆ ಬಂಧಿಸುತ್ತಾರೆ ಎಂಬುದು ಕಾದು ನೋಡಬೇಕಾಗಿದೆ ಎಂದರು.ಪ್ರಜ್ವಲ್ ವೀಡಿಯೋ ಹೇಳಿಕೆಯ ಮೂಲದ ಬಗ್ಗೆ ಕೇಳಿದ ಪ್ರಶ್ನೆಗೆ ಉತ್ತರಿಸಿದ ಪರಮೇಶ್ವರ್, ನನಗೆ ಗೊತ್ತಿಲ್ಲ, ಮಾಧ್ಯಮಗಳು ನನಗೆ ತೋರಿಸಿದ್ದೀರಿ, ಅವರು ಹೇಳಿಕೆ ಬಿಡುಗಡೆ ಮಾಡಿದ್ದಾರೆ ಎಂದು ಒಂದೆರಡು ಗಂಟೆಗಳ ಹಿಂದೆ ಮಾಹಿತಿ ಸಿಕ್ಕಿತು, ಆದರೆ ನಾನು ವೀಡಿಯೊ ನೋಡಿಲ್ಲ ಎಂದರು. ರಾಜ್ಯ ಸರ್ಕಾರ ಮತ್ತು ಕೇಂದ್ರಕ್ಕೆ ಅವರನ್ನು ಮರಳಿ ಕರೆತರಲು ಏಕೆ ಸಾಧ್ಯವಾಗಲಿಲ್ಲ ಎಂಬ ಪ್ರಶ್ನೆಗೆ ಉತ್ತರಿಸಿದ ಪರಮೇಶ್ವರ್, ಹೊರರಾಜ್ಯದಿಂದ ಯಾರನ್ನಾದರೂ ಕರೆತರುವುದು ಸುಲಭವಲ್ಲ, ಕೆಲವು ವಿಧಿವಿಧಾನಗಳನ್ನು ಅನುಸರಿಸಬೇಕು. ಈ ವಿಚಾರದಲ್ಲಿ ಕೇಂದ್ರ ಸರ್ಕಾರ ಸರಿಯಾಗಿ ಸಹಕಾರ ನೀಡಲಿಲ್ಲ. ಪ್ರಜ್ವಲ್ ಅವರ ಪಾಸ್ ಪೋರ್ಟ್ ರದ್ದುಗೊಳಿಸುವುದಾಗಿ ಕೇಂದ್ರ ವಿದೇಶಾಂಗ ಸಚಿವರು ಹೇಳಿದ್ದರು. ಆದರೆ, ಅದು ಆಗಲಿಲ್ಲ. ನಮ್ಮ ಮನವಿಗೆ ಸ್ಪಂದಿಸಲಿಲ್ಲ ಎಂದು ಆರೋಪಿಸಿದರು.ಮತ್ತೊಂದೆಡೆ ಇದೇ ವಿಚಾರ ಕುರಿತು ಪ್ರತಿಕ್ರಿಯಿಸಿದ ಡಿಸಿಎಂ ಡಿಕೆ ಶಿವಕುಮಾರ್, ಪ್ರಜ್ವಲ್ ರೇವಣ್ಣ ಅವರ ವಿಡಿಯೋ ಸಂದೇಶದ ಬಗ್ಗೆ ಹೆಚ್ಚಿನ ಮಾಹಿತಿ ಇಲ್ಲ. ಮಾಧ್ಯಮ ಪ್ರತಿನಿಧಿಗಳು ಹೇಳಿದ್ದರಿಂದ ವಿಚಾರ ತಿಳಿಯಿತು. ಅವರು ಎಸ್ ಐಟಿ ಮುಂದೆ ವಿಚಾರಣೆಗೆ ಹಾಜರಾಗದೆೇ ಬೇರೆ ದಾರಿಯಿಲ್ಲ. ಈ ಪ್ರಕರಣದಲ್ಲಿ ಕಾನೂನು ತನ್ನ ಕ್ರಮ ಕೈಗೊಳ್ಳಲಿದೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಮಾಧ್ಯಮಗಳಲ್ಲಿ ಬಂದ ವರದಿ ಆಧರಿಸಿ ರಾಹುಲ್ ಗಾಂಧಿ ಅವರು ಮಾತನಾಡಿದ್ದಾರೆ. ರಾಹುಲ್ ಗಾಂಧಿ ವಿಚಾರ ಪ್ರಸ್ತಾಪ ಮಾಡಿರುವ ಪ್ರಜ್ವಲ್ ಗೆ ಕಾಲವೇ ಉತ್ತರ ನೀಡಲಿದೆ ಎಂದರು.ಈ ಮಧ್ಯೆ ಚಿಕ್ಕಬಳ್ಳಾಪುರದಲ್ಲಿ ಪ್ರತಿಕ್ರಿಯಿಸಿದ ಜೆಡಿಎಸ್ ನಾಯಕ ಹೆಚ್ ಡಿ ಕುಮಾರಸ್ವಾಮಿ, ವಾಪಸ್ ಬರುವ ಕುರಿತು ದೇವೇಗೌಡರು ನೀಡಿದ ನಿರ್ದೇಶನಕ್ಕೆ ಪ್ರಜ್ವಲ್ ರೇವಣ್ಣ ಪ್ರತಿಕ್ರಿಯಿಸಿರುವುದು ಸ್ವಲ್ಪ ಸಮಧಾನ ತಂದಿದೆ.ಮೇ 31 ರಂದು ತನ್ನ ವಿರುದ್ಧದ ಪ್ರಕರಣಗಳ ತನಿಖೆಗೆ ಎಸ್‌ಐಟಿ ಮುಂದೆ ಹಾಜರಾಗುವುದಾಗಿ ಭರವಸೆ ನೀಡಿದ್ದಾರೆ. ಮುಂದಿನ ದಿನಗಳಲ್ಲಿ ತನಿಖೆಯಿಂದ ಸತ್ಯಾಂಶ ಹೊರಗೆ ಬರಲಿದೆ. ಇದರಲ್ಲಿ ಯಾರ ಪಾತ್ರವಿದೆ ಎಂಬುದು ತಿಳಿದುಬರಲಿದೆ. ಅವರು ಏನೂ ಮಾಡಲಿದ್ದಾರೆ ಎಂಬುದನ್ನು ಕಾದು ನೋಡೋಣ ಎಂದು ಹೇಳಿದರು.